ಎಮ್.ಬಿ.ಬಿ.ಎಸ್ ಅಂದ್ರೆ ನಿಮಗೆ ನೆನಪು ಬರುವುದು ಉಪ್ಪಿದಾದ ಇಲ್ಲಾಂದ್ರೆ ಮುನ್ನಾಬಾಯ್. ನನ್ನ ಪ್ರಕಾರ ಅವೆಲ್ಲವೂ ಸಿನೆಮಾ ಹಾಲ್ನಲ್ಲಿ ನೋಡಲು ಚಂದ. ಅಲ್ಲಿಯ ಚಿತ್ರಣವೇ ಬೇರೆ...ನೈಜತೆಯೇ ಬೇರೆ. ಈ ಡಿಜಿಟಲ್ ಹೊತ್ತಗೆಯ ಹಾಳೆಯೊಳು ನನ್ನದೊಂದು ಸಿಹಿಕಹಿ ಅನುಭವಗಳ ಸಂಗ್ರಹ ನಿಮ್ಮ ಮುಂದೆ..... ಕಳೆದ ವರ್ಷದ ಅಕ್ಟೋಬರ್ 2. ಗಾಂಧೀ ಜಯಂತಿ. ಮರುದಿನ ಬೆಳಗ್ಗೆ ಮೆಡಿಕಲ್ ಕಾಲೇಜು ಆರಂಭ ಎಂದು ಸಾಗರ(ಶಿವಮೊಗ್ಗ)ದಿಂದ ಬಾಗಲಕೋಟೆಗೆ ನನ್ನ ಕುಟುಂಬದೊಂದಿಗೆ ತೆರಳುತ್ತಿದ್ದೆ. ಮನಸ್ಸಿನಲ್ಲಿ ಒಂದಷ್ಟು ದ್ವಂದ್ವಗಳು. "ಕಾಲೇಜು ಹೇಗಿರುತ್ತದೋ ಏನೋ? ನಮ್ಮೂರಿನವರು ಯಾರಾದ್ರು ಸಿಕ್ಕಿದ್ರೆ ಒಳ್ಳೆಯದಿತ್ತು. ಅಪರಿಚಿತ ಸಹಪಾಠಿಗಳು. ಸೀನಿಯರ್ಸ್ ಬಲು ಜೋರಂತೆ, ಗುರುತು ಪರಿಚಯವಿಲ್ಲದ ಜನ". ಇಷ್ಟೆಲ್ಲಾ ಯೋಚನೆಗಳ ಮಧ್ಯೆ, ನನ್ನ ಬೆರಳುಗಳು ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿದ್ದವು. ಸರಿಯಾಗಿ ನೆನಪಿಲ್ಲ, ಅಂಗಡಿಯಿಂದ ಏನನ್ನೋ ಕೊಂಡುಕೊಳ್ಳಲು ಮಾವ ಕಾರಿನಿಂದ ಕೆಳಗಿಳಿಯಲು ಹೇಳಿದರು. ಕೈಯಲ್ಲಿದ್ದ ಮೊಬೈಲ್ ಕಿಸೆಯೊಳಗೆ ಹಾಕಿ ಬಾಗಿಲು ತೆಗೆದಿರಬಹುದೇನೋ?ಅಂಗಡಿಯಿಂದ ಬೇಕಾದದ್ದು ಸಿಕ್ಕಿದ ನಂತರ ಮತ್ತೆ ಕಾರಿಗೆ ಹತ್ತಿ , 5 ನಿಮಿಷ ಕಾರಲ್ಲಿ ಮುಂದೆ ಸಾಗಿ, ಕಿಸೆಯೊಳಗೆ ಮೊಬೈಲ್ ತೆಗೆಯೋಣ ಎಂದಾಗ ಕಾದಿತ್ತು ಶಾಕ್! ಹೌದು ನೀವು ಸರಿಯಾಗಿ ಇಮಾಜಿನ್ ಮಾಡಿದ್ದೀರಿ. ದೂರ ಪ್ರಯಾಣವಾದ್ದರಿಂದ ಚಾರ್ಜ್ ಉ...