ಕಾರಿಡಾರ್‍ನಲ್ಲಿ ಒಂದು ರೌಂಡ್ . . . .
………………………………………………
ಕಾರಿಡಾರಿನಲ್ಲಿ ನಿಂತ ನಾಲ್ಕು ಹುಡುಗರು
ಸ್ವಾತಿಯನ್ನು ಪಾಪ ಗೇಲಿ ಮಾಡುತ್ತಿದ್ದರು.....
………………………………………………………
ಕಾಲೇಜು ಕ್ಯಾಂಪಸ್ಸಿನ ಪ್ರಮುಖ ಅಡ್ಡಗಳಲ್ಲಿ ಕಾರಿಡಾರ್ ಕೂಡ ಒಂದು. ನಮ್ಮ ಕಾಲೇಜಿನ ಕಾರಿಡಾರನ್ನು ನಾಲ್ಕಾರು ದಿನ ಬಿಡದೇ ಸುತ್ತಿದ ನನಗೆ ಹಲವು ಸೋಜಿಗದ ವಿಚಾರಗಳು ಅರಿವಿಗೆ ಬಂತು. ಕ್ಲಾಸ್ ಫ್ರೀ ಇರುವಾಗ ಗ್ರಂಥಾಲಯಕ್ಕೆ ಹೋಗದೆ, ಕೆಲವು ಗಂಡ್ ಹೈಕ್ಳು ಆ ತರಗತಿಯಿಡೀ ದೇವಸ್ಥಾನದಲ್ಲಿ ಗರ್ಭಗುಡಿಯನ್ನು ಸುತ್ತಿದಂತೆ ಕಾರಿಡಾರ್ ಸುತ್ತುತ್ತಾರೆ. ತರಗತಿಯಲ್ಲಿ ಪಾಠ ಕೇಳುತ್ತಿರುವ ತಮ್ಮ ಸ್ನೇಹಿತರ ಹೊಟ್ಟೆ ಉರಿಸಲು ಕಾರಿಡಾರ್ ಸುತ್ತುವುದು ಕೆಲವು ವಿದ್ಯಾರ್ಥಿಗಳ ದಿನಚರಿಯಾಗಿರುತ್ತದೆ. ಹಾಗೆ ಸುತ್ತು ಹಾಕುವಾಗ ಒಂದಷ್ಟು ಕ್ಯೂಟ್ ಹೆಣ್ಮಕ್ಳಿಗೆ ಲೈನ್ ಹಾಕೋದು ಅವರ ಅಜೆಂಡಾಗಳಲ್ಲಿ ಒಂದು.
ಹೆಣ್ಮಕ್ಳನ್ನು ಚುಡಾಯಿಸುವ ಗಂಡ್‍ಹೈಕ್ಳು
ಲೈನ್ ಹಾಕಿದರೆ ಸಾಲದೆಂಬಂತೆ ಕೆಲವರಿಗೆ ಪಾಪದ ಹೆಣ್ಮಕ್ಕಳ ಅಟೆಂಡನ್ಸ್ ಕರೆಯುವ ಅಭ್ಯಾಸವೂ ಇದೆ. ಯಾರ ತಂಟೆಗೂ ಹೋಗದ ಪಾಪದ ಹೆಣ್ಮಕ್ಕಳ ಹೆಸರನ್ನು ಜೋರಾಗಿ ಕರೆದು ನೀನು ಪ್ರೆಸೆಂಟಾ ಅಲ್ಲಾ ಆಬ್ಸೆಂಟಾ ಎಂದು ವ್ಯಂಗ್ಯವಾಡುವ ಚಾಳಿ ಪಡ್ಡೆಗಳದ್ದು. ಕಲರ್ ಡ್ರೆಸ್ ದಿನವಂತು ಹೆಣ್ಮಕ್ಕಳಿಗೆ ತಲೆ ಎತ್ತಿ ಓಡಾಡದ ಪರಿಸ್ಥಿತಿ. ಬಣ್ಣ ಬಣ್ಣದ ದಿರಿಸಿನಲ್ಲಿ ಕಂಗೊಳಿಸುವ ನಾರೀಮಣಿಯರಿಗೆ ಕಮೆಂಟ್ ಹಾಕದಿದ್ದರೆ ಹುಡುಗರಿಗೆ ಸಮಾಧಾನವೇ ಇಲ್ಲ. ಒಂದಷ್ಟು ಹುಡುಗಿಯರನ್ನು ಅವರ ಬಾಯ್‍ಫ್ರೆಂಡ್‍ಗಳ ಹೆಸರಿನಿಂದ ಕರೆದು ಕುಹಕವಾಡುತ್ತಾರೆ ಈ ಹೈಕ್ಳು.
ಗುಟ್ಟುರಟ್ಟು ಮಾಡುವ ಪಿಸುಮಾತುಗಳು
ಕೆಲವರಿಗೆ ಕಾರಿಡಾರ್ ಎಂಬುದು ಪಾರ್ಕಿಂಗ್ ಲಾಟ್ ಇದ್ದಂತೆ. ವಾಹನಗಳ ಮಾಲಕರು ತಮ್ಮ ವಾಹನವನ್ನು ನಿಲ್ಲಿಸಿ ಹೋಗುವಂತೆ; ಗಂಟೆಗಳ ಕಾಲ ಕಾರಿಡಾರ್‍ನಲ್ಲಿ ನಿಂತುಕೊಂಡು ಹರಟೆ ಹೊಡೆಯುತ್ತಾರೆ ಕೆಲ ವಿದ್ಯಾರ್ಥಿಗಳು. ಈ ಸಂದರ್ಭದಲ್ಲಿ ಹಲವು ಪಿಸುಗುಸು ಮಾತುಗಳು ಮಹಾನ್ ಸೀಕ್ರೆಟ್ ಎನಿಸಿರುವ ಗುಟ್ಟುಗಳನ್ನು ರಟ್ಟು ಮಾಡುತ್ತವೆ. ರಟ್ಟಾದ ಗುಟ್ಟುಗಳು ಪಾದಚಾರಿಗಳ ಕಿವಿಗೆ ಬಿದ್ದು ಇಡೀ ಕ್ಯಾಂಪಸ್ಸಿನಲ್ಲಿ ವೈರಲ್ ಆಗುತ್ತವೆ.
ನೆಲಮಹಡಿ ಎಂ.ಜಿ ರೋಡ್ ಇದ್ದಂತೆ
ಕಾಲೇಜಿನ ನೆಲಮಹಡಿ ಎಂಬುದು ಎಂ.ಜಿ.ರೋಡ್ ಇದ್ದಂತೆ. ಬಹುತೇಕ ಚಟುವಟಿಕೆಗಳು ನಡೆಯುವುದು ಇಲ್ಲಿಯೇ. ಹಾಗಾಗಿ ಯಾವತ್ತೂ ನೆಲಮಹಡಿಯಲ್ಲಿ ಗಿಜಿಗಿಜಿ ವಾತಾವರಣ. ಮುಖ್ಯವಾದ ಭೇಟಿಗಳು, ವಿಚಾರ ವಿನಿಮಯ, ಚರ್ಚೆಗಳು, ಅನಧಿಕೃತ ಬೇಹುಗಾರಿಕೆ, ಮನದಾಳದ ಮಾತುಗಳು ನಡೆಯುವುದು ನೆಲಮಹಡಿಯಲ್ಲಿ. ಅದಕ್ಕೂ ಸೀಮಿತ ಸ್ಥಳಗಳಿವೆ. ನೋಟೀಸ್ ಫಲಕದ ಬಳಿ ನೋಟೀಸ್ ನೋಡುವಂತೆ ನಾಟಕವಾಡುತ್ತಾ ತಮ್ಮ ಕೆಲಸವನ್ನು ಲೀಲಾಜಾಲವಾಗಿ ಮುಗಿಸುತ್ತಾರೆ ವಿದ್ಯಾರ್ಥಿಗಳು.
ಆಪ್ತಮಾತುಕತೆ
ಕೆಲವೊಂದು ಗಾಢವಾದ ಗೆಳೆತನ ಬೆಳೆಯುವುದು ಕಾರಿಡಾರಿನಲ್ಲಿಯೇ. ತಿಂಡಿಯಿಂದ ಶುರುವಾಗುವ ಮಾತುಕತೆ ಹಾಸ್ಟೆಲ್, ಮೆಸ್ಸಿನ ಎಲ್ಲ ವಿದ್ಯಾಮಾನಗಳನ್ನು ಹಂಚಿಕೊಳ್ಳುವ ತನಕ ಯಾವುದೇ ಕಮರ್ಷಿಯಲ್ ಬ್ರೇಕ್ ಇಲ್ಲದೆ ನಾನ್‍ಸ್ಟಾಪ್ ಬಸ್ಸಿನಂತೆ ಸಾಗುತ್ತದೆ. ಪ್ರಾಧ್ಯಾಪಕರಿಗೆ ನಾಮಕರಣ ಕಾರ್ಯಕ್ರಮ ನಡೆಸುವ ವಿದ್ಯಾಥಿಗಳು ಕ್ಲಾಸ್ ಬಂಕ್ ಮಾಡುವ ತೀರ್ಮಾನವನ್ನು ಕಾರಿಡಾರಿನಲ್ಲಿ ಕೈಗೊಳ್ಳುತ್ತಾರೆ. ಹೀಗೆ ಪ್ರಮುಖ ನಿರ್ಣಯಗಳಿಗೆ ಸಾಕ್ಷಿಯಾಗುತ್ತದೆ ಕಾರಿಡಾರ್.
ಗಾಳ ಹಾಕುವ ಕಾರ್ಯಕ್ರಮ
ಕೆಲವೊಂದು ನಿರ್ಧಿಷ್ಟ ಅವಧಿಯಲ್ಲಿ ಗಾಳ ಹಾಕುವ ಕಾರ್ಯಕ್ರಮ ನಡೆಸುತ್ತಾರೆ ಹುಡುಗರು. ಕೆಲವೊಂದು ಹುಡುಗಿಯರ ಚಲನವಲನಗಳನ್ನು ಪದೇ ಪದೇ ಗಮನಿಸುವ ಗಂಡ್ ಮಕ್ಳು ಹೆಣ್ಮಕ್ಳ ಬಗ್ಗೆ ಪಿಎಚ್‍ಡಿ ಪಡೆಯುವಷ್ಟು ಸಂಶೋಧನೆ ನಡೆಸಿರುತ್ತಾರೆ. ಚಂದದ ಹುಡುಗಿಯರು ಬರುತ್ತಿದ್ದಾರೆಂದರೆ ಅವರಿಗೆ ಲೈನ್ ಹೊಡೆಯುವುದು, ಡ್ಯಾಶ್ ಹೊಡೆಯುವುದು ಗಂಡ್ ಮಕ್ಕಳ ಚಾಳಿ. ಹಾಗೆಯೇ ಬೇಕು ಬೇಕೆಂದೇ ಹುಡುಗಿಯರನ್ನು ಕರೆದು ಮಾತನಾಡಿಸುವ ಪ್ರಸಂಗ ಕೂಡ ನಡೆಯುತ್ತದೆ.
ಪೌರುಷ ಪ್ರದರ್ಶನ
ಗಂಡು ಮಕ್ಕಳ ಪೌರುಷ ಪ್ರದರ್ಶನ ನಡೆಯುವುದು ಕಾರಿಡಾರ್‍ನಲ್ಲಿ. ಕೆಲವೊಂದು ಸನ್ನಿವೇಶಗಳಲ್ಲಂತೂ ಕೋಳಿಗಳು ಜಗಳವಾಡುವಂತೆ ಭಾಸವಾಗುತ್ತದೆ. ಅಲ್ಲಿಗೆ ಶಿಸ್ತುಪಾಲನಾ ಸಮಿತಿಯವರು ಆರಂಕ್ಷಕರಂತೆ ಬಂದು ದಾಳಿಯಿಟ್ಟಾಗ, ಕೆಲ ಹುಡುಗರು ಪರಾರಿಯಾಗುತ್ತಾರೆ. ಇನ್ನು ಕೈಗೆ ಸಿಕ್ಕಿದ ಬಡಪಾಯಿಗಳ ಐಡಿ ವಶಪಡಿಸಿಕೊಳ್ಳಲಾಗುತ್ತದೆ. ಅಲ್ಲಿಗೆ ಪೌರುಷ ಪ್ರದರ್ಶನಕ್ಕೆ ಬ್ರೇಕ್ ಬೀಳುತ್ತದೆ.
ಭಾವನಾತ್ಮಕ ಸಂಬಂಧ
ಪ್ರತಿಯೊಬ್ಬ ಕಾಲೇಜು ವಿದ್ಯಾರ್ಥಿಗೆ ಕಾರಿಡಾರ್‍ನೊಂದಿಗೆ ಭಾವನಾತ್ಮಕ ಸಂಬಂಧವಿರುತ್ತದೆ. ಕಾರಿಡಾರ್ ಗೆಳೆತನವನ್ನು ಬೆಸೆಯುವ ಕೊಂಡಿ ಇದ್ದಂತೆ. ಹಲವು ಸುತ್ತಾಟ, ಪಟ್ಟಾಂಗಗಳಿಗೆ ಆಸರೆಯಾಗುವ ಕಾರಿಡಾರ್ ಎಂದರೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಕಾಲೇಜು ಜೀವನದಲ್ಲಿ ಒಂದು ಬಾರಿಯಾದರೂ ಕಾರಿಡಾರ್ ಸುತ್ತಿಲ್ಲವೆಂದರೆ ನಿಜಕ್ಕೂ ನೀವೊಂದು ಸುಂದರವಾದ ಕ್ಷಣವನ್ನು ಕಳೆದುಕೊಳ್ಳುತ್ತೀರಿ.ಈ ಬರಹವನ್ನು ಓದಿದ ಮೇಲಾದರೂ ಕಾರಿಡಾರ್ ಸುತ್ತಾಡಿ.
ಇಂದೇ ಸುತ್ತಿದರೆ ಚೆನ್ನ!!!!
……………………………………….
ಪ್ರಜ್ಞಾ ಹೆಬ್ಬಾರ್
Comments
Post a Comment