"ಹೊಟ್ಟೆಗೆ ಹಿಟ್ಟಿಲ್ಲ, ಆದರೂ ಜುಟ್ಟಿಗೆ ಮಲ್ಲಿಗೆ ಹೂ" ಯಾಕೋ ತಮಿಳುನಾಡಿನವರಿಗೆ ಬಹಳಷ್ಟು ಹೊಂದಿಕೆಯಾಗುತ್ತದೆ. ಅಲ್ಲಿನ ಸರ್ಕಾರ ಕೊಡುವ 'ಭಾಗ್ಯ'ಗಳಿಗೇನು ಕಡಿಮೆ ಇಲ್ಲ ಬಿಡಿ! ಅಮ್ಮ ಕ್ಯಾಂಟೀನ್, ಅಮ್ಮ ಸೀರೆ, ಅಮ್ಮ ಉಪ್ಪು, ಅಮ್ಮ ಲ್ಯಾಪ್ ಟಾಪ್, ಅಮ್ಮ ಮೊಬೈಲ್, ಅಮ್ಮ....ಅಮ್ಮ....ಅಮ್ಮ......! ರಾಜಕಾರಣಿಗಳು ಜನರ ದುಡ್ಡನ್ನು ಕೊಳ್ಳೆ ಹೊಡೆದು, ಎಲೆಕ್ಷನ್ ಟೈಮಲ್ಲಿ ಇಂತಹ Short term ಆಮಿಷಗಳನ್ನು ತೋರಿಸಿ, ಜನತೆಯ ತುಟಿಗೆ ತುಪ್ಪ ಸವರುತ್ತಾರೆ. ಪಾಪ ಜನರ ಪಾಲಿಸಿ ಏನಂದ್ರೆ 'ಓಟಿಗಾಗಿ ನೋಟು'!! ರೋಡು , ಶಿಕ್ಷಣ, ವಸತಿ ಅಂತ ಬೀದಿಗಿಳಿದದ್ದೇ ಇಲ್ಲ. ಸಿನೆಮಾವನ್ನು ಹಚ್ಚಿಕೊಂಡಷ್ಟು ತಮ್ಮ ಜೀವನವನ್ನೇ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ.
ಶೈಕ್ಷಣಿಕವಾಗಿ ಮುಂದುವರೆಲು ಯೋಚಿಸಲೇ ಇಲ್ಲ ತಮಿಳು ನಾಡು. ದ್ವಿತೀಯ ಪಿಯು ಮುಗಿದ ನಂತರ ಬೋರ್ಡ್ ಎಕ್ಸಾಮ್ ಮಾರ್ಕ್ ನೋಡಿ ಮೆಡಿಕಲ್ ಸೀಟ್ ಹಂಚುವುದು ಸಲೀಸಾಗಿತ್ತು ಅವರಿಗೆ. ಆ ಪ್ರಕ್ರಿಯೆಗಳಲ್ಲಿ ಎಷ್ಟು ಅಕ್ರಮ ನಡೆಯುತ್ತದೋ ಏನೋ . ಅವರದ್ದೇ ಸರ್ಕಾರ, ಅವರದ್ದೇ ಬೋರ್ಡ್ ಎಕ್ಸಾಮ್, ಅವರದ್ದೇ ಪ್ರಶ್ನೆ ಪತ್ರಿಕೆ, ಅವರೇ ಮೆಡಿಕಲ್ ಸೀಟಿನ ಡಿಸ್ಟ್ರಿಬ್ಯೂಟರ್ಸ್! ಅಲ್ಲಿನವರಿಗೆ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಇರುವವರು ಒಂದಿಷ್ಟು ಮಂದಿ ಮಾತ್ರ ಅನಿಸುತ್ತದೆ. ಏಕೆಂದರೆ ನಮ್ಮ ಕರ್ನಾಟಕದಲ್ಲಿರುವಂತೆ ಸಿ.ಇ.ಟಿ ಇರಲೇ ಇಲ್ಲ. ಅದೇ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಕುದ್ದು ಮೋದಿಯವರಿಗೆ ಪತ್ರದ ಮೂಲಕ ತಮಿಳುನಾಡಿನಲ್ಲಿ ಎಂದಿಗೂ ನೀಟ್ ಜಾರಿಗೊಳಿಸದಂತೆ ಕೋರಿದ್ದು(ಅದಾಗ ಮೋದಿಯವರು ಒಂದು ವರ್ಷದ ಮಟ್ಟಿಗೆ ನೀಟ್ ಜಾರಿಗೊಳಿಸದಿರಲು ಸುಗ್ರೀವಾಜ್ಞೆಯನ್ನು ಹೊರಡಿಸುವಲ್ಲಿದ್ದರು). ಆ ಒಂದು ವರ್ಷ ನೀಟ್ ಪರೀಕ್ಷೆಯಿಂದ ಇಡೀ ದೇಶವೇ ವಿನಾಯಿತಿ ಪಡೆಯಿತು.
ಆಕೆ ಡಾಕ್ಟರ್ ಆಗಬೇಕೆಂದು ಬಹು ಎತ್ತರದ ಕನಸು ಕಂಡಿದ್ದಳು. ಆಕೆಯ ತಂದೆ ದಿನಂಪ್ರತಿ ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಇಂತಹ ಬಡತನದಲ್ಲಿದ್ದರೂ ತನ್ನ ಹಠವನ್ನು ಮಾತ್ರ ಎಂದಿಗೂ ಸಡಿಲಗೊಳಿಸಲಿಲ್ಲ. ಸದಾ ಪುಸ್ತಕಗಳಲ್ಲೇ ಇರುತ್ತಿದ್ದಳು. ಹಗಲು ರಾತ್ರಿ ಎನ್ನದೇ ಅಭ್ಯಾಸ ಮಾಡುತ್ತಿದ್ದಳು. ಬಹುಶ: ಅವಳಿಗೂ ತಿಳಿದಿತ್ತು ,ತನ್ನ ದ್ವಿತೀಯ ಪಿಯುಸಿ ಬಳಿಕ ನೀಟ್ ಕಡ್ಡಾಯವಾಗಿ ಬರೆಯಲೇಬೇಕೆಂದು. ಏಕೆಂದರೆ ಸುಗ್ರೀವಾಜ್ಞೆ ಆ ಹಿಂದಿನ ವರ್ಷಕ್ಕಷ್ಟೇ ಸೀಮಿತವಾಗಿತ್ತು. ಅವಳ ಸಿದ್ಧತೆ ಸಂಪೂರ್ಣವಾಗಿ ತಮಿಳುನಾಡಿನ ಬೋರ್ಡ್ ಪರಿಕ್ಷೆಯ ಕಡೆಗೆ ಇತ್ತೇ ಹೊರತು 'ನೀಟ್'ನೆಡೆಗಲ್ಲ. ಆ ಬೋರ್ಡ್ ಎಕ್ಸಾಮಿನಲ್ಲಿ ಪಡೆದ ಅಂಕ ಎಷ್ಟೆಂದು ಊಹಿಸುವಿರಾ? 1200 ಅಂಕಗಳಲ್ಲಿ ಗಳಿಸಿದ್ದು ಬರೋಬ್ಬರಿ 1176. ಪರೀಕ್ಷಾ ಅಭ್ಯಾಸ ಅದೆಷ್ಟು ವ್ಯವಸ್ಥಿತವಾಗಿರಬಹುದೆಂದು ಯೋಚಿಸಿ.
ಒಂದು ದಿನ ,17 ವರ್ಷ ಪ್ರಾಯದ ಅನಿತಾ ಆತ್ಮಹತ್ಯೆಗೆ ಶರಣಾಗುತ್ತಾಳೆ. ಆಗ ಪಾರ್ಥೀವ ಶರೀರದ ಮೇಲೆ 'ಸ್ಟೆತೋಸ್ಕೋಪ್' ಇಟ್ಟು ಅಂತಿಮ ದರ್ಶನ ಪಡೆಯುತ್ತಾರೆ ಗ್ರಾಮಸ್ಥರು. ಅರೆ! ಆ ಪರಿ ಸಂಕಟವಾದರೂ ಏನಿತ್ತು ಎಂದು ಯೋಚಿಸುತ್ತಿದ್ದೀರಾ? ಹೌದು, ನೀಟ್ ಪರೀಕ್ಷೆ ಅನಿತಾಳ ಪಾಲಿಗೆ 'ನುಂಗಲಾರದ ಬಿಸಿತುಪ್ಪ'ವಾಗಿತ್ತು. 720ಕ್ಕೆ ಗಳಿಸಿದ್ದು ಕೇವಲ 86! ಎಮ್.ಬಿ.ಬಿ.ಎಸ್ ಆಸೆ ನುಚ್ಚುನೂರಾಯಿತು. ಬೇರೆ ಯಾವುದೇ ವೃತ್ತಿಪರ ಕೋರ್ಸುಗಳನ್ನು ಅನಿತಾ ಮೆಚ್ಚಿಲ್ಲ. ಅವಳು ತಮಿಳು ನಾಡಿಗೆ 'ನೀಟ್' ಹೇರಿಕೆ ವಿರುದ್ಧ ಸುಪ್ರೀಂ ಕದ ತಟ್ಟಿದಳು. ಬೀದಿಗಿಳಿದು ಹೋರಾಟ ಮಾಡಿದಳು. ಮೀಡಿಯಾದಲ್ಲಿ ಸುದ್ದಿಯಾದ್ದು ಬಿಟ್ಟರೆ, ಯಾವುದೇ ಪ್ರಯೋಜನವಾಗಲಿಲ್ಲ. ದಾರಿ ಬೇರೊಂದಿಲ್ಲವೆಂದು ಭಾವಿಸಿ ಹಗ್ಗಕ್ಕೆ ಕೊರಳು ಕೊಟ್ಟಳು.
ತಪ್ಪು ಯಾರದ್ದು; ನೇಣು ಹಾಕಿಕೊಂಡದ್ದೇ ದೊಡ್ಡ ತಪ್ಪು. ಮನಸ್ಸಿನ ದೌರ್ಬಲ್ಯತೆಯನ್ನು ಎತ್ತಿ ಹಿಡಿಯುವಂತಿದೆ ಅವಳ ಸಾವು! ಬೆಟ್ಟದಷ್ಟು ದೊಡ್ಡ ಆಸೆಯಿಟ್ಟುಕೊಂಡು, ಬೆಟ್ಟ ಹತ್ತಲು ಹುಲ್ಲು ಅಡ್ಡವಾಗುತ್ತದೆ ಎಂದು ಕಾಲು ಕತ್ತರಿಸಬಾರದಿತ್ತು!!!ಸಾವೇ ಕೊನೇಯ ಔಷಧಿ ಎಂಬುದು ಆಕೆಗೆ ಹೇಗೆ ತಿಳಿಯಿತೋ ಏನೋ, ಅದನ್ನೇ ಸೇವಿಸಿದಳು. ನನ್ನದೊಂದು ಪ್ರಶ್ನೆ. ಒಂದು ಪರೀಕ್ಷೆಯನ್ನು ಎದುರಿಸಲಾಗದೆ, ಪರೀಕ್ಷೆಯನ್ನೇ ವಿರೋಧಿಸಿ ಕೊನೆಗೆ ನೇಣಿಗೂ ಶರಿಣಾದವಳು ,ನಾಳೆ ವೈದ್ಯೆಯಾಗಿ ಯಾವುದೋ ಕೇಸಿನಲ್ಲಿ ಎಡವಟ್ಟಾಗಿ, ಜನರ ಕೈಯಲ್ಲಿ ಉಗಿಸಿಕೊಂಡಾಗ ಹೇಗೆ ಧೈರ್ಯ ತಾಳಿಯಾಳು! ಆವಾಗಲೂ ಇದೇ ನಿರ್ಧಾರಕ್ಕೆ ಬರುತ್ತಿದ್ದಳೋ ಏನೋ. ಇಲ್ಲಿ ಒಂದು ವಿಷಯವನ್ನು ಒತ್ತು ಕೊಟ್ಟು ಹೇಳಬಯಸುತ್ತೇನೆ. ನೀಟ್ ಪರೀಕ್ಷೆಯೆಂಬ ಮೊಸರಿನಲ್ಲಿ ಕಲ್ಲನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನೀಟ್ ಒಂದು Standard ಪರೀಕ್ಷೆ. ಏಕ ರೂಪದಲ್ಲಿ ಇಡೀ ದೇಶದಲ್ಲಿ ಜಾರಿಯಾದದ್ದು ನಿಜಕ್ಕೂ ಒಳ್ಳೆಯ ಸಂಗತಿ. ರಾಜ್ಯಗಳ ಸಿಇಟಿ ಕರ್ಮಕಾಂಡಗಳಿಗೆ ಬೆಂಕಿ ಇಡುವ ಪ್ರಯತ್ನ ಸಾಕಾರಗೊಂಡಿದ್ದು , ಖಾಸಗಿ ವೈದ್ಯಕೀಯ ಕಾಲೇಜುಗಳ ದರ್ಬಾರಿಗೆ ಹಳ್ಳ ತೋಡಿದ್ದು ಇದೇ ಪರೀಕ್ಷೆ. ಇದರಿಂದ ಹತ್ತಾರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಬದಲು ನ್ಯಾಷನಲ್ ಲೆವೆಲ್ನಲ್ಲಿ ಒಂದೇ ಎಕ್ಸಾಮ್ ಬರೆದರೆ ಸಾಕಾಗಿತ್ತು.ಅಲ್ಲದೇ ಒಂದು ವರ್ಷದ ಮೊದಲೇ ಎಚ್ಚರಿಸಿ ಜಾರಿಗೊಳಿಸಲಾಯಿತು. ಆಕೆ ಒಂದು ವರ್ಷದ ಮೊದಲೇ ಓದುವ ಮಾರ್ಗವನ್ನು ಬದಲಿಸಬೇಕಿತ್ತು. ಅದು ಬಿಟ್ಟು ಅಂತ್ಯದಲ್ಲಿ ಹೋರಾಟ ಮಾಡಿದ್ದು ಸರಿಯಲ್ಲ. ಮತ್ತೊಂದು ಅವಧಿಯಾದರೂ ಕಾದು ಕನಸನ್ನು ನನಸಾಗಿಸಬಹುದಿತ್ತು. ಸಾವಿಗೂ ಮುನ್ನ ತಂದೆಯನ್ನಾದರೂ ನೆನೆದಿದ್ದರೆ , ಬದುಕಿರುತ್ತಿದ್ದಳೋ ಏನೋ.....
" ನೀಟ್ ಬರೆಯಲು ನಮ್ಮಂತಹ ಬಡವರಿಗೆ ಹೇಗೆ ಸಾಧ್ಯ? ಸ್ಟೇಟ್ ಸಿಲೆಬಸ್ ನ ಪ್ರಶ್ನೆಗಳು ನೀಟಿನಲ್ಲಿ ಇಲ್ಲ. ಸಿ.ಬಿ.ಎಸ್ ನವರು ಸುಲಭವಾಗಿ ಉತ್ತೀರ್ಣರಾಗುವರು. ಅಲ್ಲದೇ ಕೋಚಿಂಗ್ ಗೆ ತೆರಳುವಷ್ಟು ಹಣವಿಲ್ಲ. ಹಾಗಾಗಿ ನಾನು ನೀಟ್ ವಿರೋಧಿಸುತ್ತೇನೆ". ಸ್ವತ: ಅನಿತಾಳೇ ಉಚ್ಛರಿಸಿದ ಶಬ್ಧಗಳಿವು. ಅವಳು ಕೊಟ್ಟ ಕಾರಣ ನನಗೆ ಸರಿಯಾಗಿದೆ ಅನಿಸುತ್ತಿದೆ. ಇಲ್ಲಿ ಗಮನಿಸಬೇಕಾದ್ದು ನೀಟ್ ಹೇರಿಕೆಯ ನಂತರ ಸರ್ಕಾರದ ವೈಫಲ್ಯ. ಆಕೆ ಸತ್ತ ನಂತರ ಕಣ್ಣೀರಿಟ್ಟ ಶಿಕ್ಷಣ ಸಚಿವರು, ಆರೋಗ್ಯ ಸಚಿವರು ನೀಟ್ ಎದುರಿಸುವ SKILL ನ್ನು ಮಕ್ಕಳಲ್ಲಿ ತುಂಬುವ ಪ್ರಯತ್ನವನ್ನು ಮಾಡಿರಲೇ ಇಲ್ಲ. ಒಂದು ವಸಂತದ ಅವಧಿಯಲ್ಲಿ ಯಾವ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಸಾವಿನ ಬಳಿಕ ನಿದ್ದೆಯಿಂದ ಹೊರಬಂದು ಸರಕಾರ ಹಲವೆಡೆ ಕೋಚಿಂಗ್ ಸೆಂಟರ್ ತೆರೆಯಿತು. ಎಲೆಕ್ಷನ್ ಟೈಮಿನಲ್ಲಿ ತಮ್ಮ 'ಮ್ಯಾನಿಫೆಸ್ಟೋ' ದಲ್ಲಿ ಉಚಿತ ಮೊಬೈಲ್, ಲ್ಯಾಪ್ ನೀಡುವ ಕೆಳಮಟ್ಟದ ಚಿಂತನೆ ಹೊಂದಿರುವ ರಾಜಕೀಯ ಪಕ್ಷಗಳು, ಎಂದಾದರೂ ಶೈಕ್ಷಣಿಕ ವಿಷಯದ ಅಭಿವೃದ್ಧಿಯ ಜಪ ಮಾಡಿದ್ದನ್ನು ಕಂಡವರಾರಿದ್ದರೆ ಹೇಳಿ. ಅಲ್ಲಿನ ಜನರೂ ಮೂರ್ಖರಂತೆ ಅಂತಹವರನ್ನೇ 'ದೊಡ್ಡ ಕುರ್ಚಿ' ಯಲ್ಲಿ ಕುಳ್ಳಿರಿಸುವುದು. ಶ್ರೀನಿವಾಸ್ ರಾಮಾನುಜನ್ ,ಅಬ್ದುಲ್ ಕಲಾಂ, ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ ಶ್ರೇಷ್ಠ ನಾಡು ತಮಿಳುನಾಡು. ಇಲ್ಲಿ ಇಂತಹಾ ಸಾವಾಗಬಾರದಿತ್ತು. ತಪ್ಪು ಆಕೆಯದ್ದು ಮತ್ತು ಸರ್ಕಾರದ್ದೂ ಕೂಡಾ ಇದೆ ಎಂಬುದರಲ್ಲಿ ದೂಸ್ರಾ ಮಾತೇ ಇಲ್ಲ.
ವಂದನೆಗಳು.....
ತಮಿಳುನಾಡಿನ ಸರ್ಕಾರದವರಿಗೆ ಈ ವಿಷಯ ಕಹಿಯಾದರು ಒಪ್ಪಿಕೊಳ್ಳಲೇ ಬೇಕಾದ ಸತ್ಯ ಇನ್ನು ಮುಂದಾದರು ಅವರು ಸರಿಪಡಿಸುವ ಪ್ರಯತ್ನ ಮಾಡಿಕೊಳ್ಳಬೇಕು.ವಿಚಾರ ಪ್ರಚೋದಕವಾಗಿ ಕಂಡುಬಂದು ಉತ್ತಮವಗಿದೆ ಇಂತಹ ಲೆಖನಗಳನ್ನು ನಮಗೆ ಓದಲು ನೀಡಿದದುಕ್ಕಾಗಿ ಧನ್ಯವಾದಗಳು
ReplyDeleteಎಷ್ಟು ಸಾಧ್ಯವೋ ಅಷ್ಟು ಶೈಕ್ಷಣಿಕ ವಿಚಾರದಲ್ಲಿ ತೊಡಗಿಸುತ್ತೇನೆ. ತಮಿಳು ನಾಡಿನಲ್ಲಿ ಮುಂದಿನ ಎಲೆಕ್ಷನ್ ಪಾಲಿಟಿಕ್ಸ್ ಸ್ವಲ್ಪ ಭಿನ್ನವಾಗಬಹುದು ಅನಿಸುತ್ತದೆ.
Delete